ರಾಜಧನ
 ಭಾರತ ಸ್ವತಂತ್ರವಾದ ಬಳಿಕ ಭಾರತೀಯ ರಾಜರು ತಮ್ಮ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ನೀಡಿದ್ದಕ್ಕಾಗಿ ಅವರಿಗೆ ಸರ್ಕಾರದಿಂದ ದೊರೆಯುತ್ತಿದ್ದ ಸಹಾಯಧನ (ಪ್ರಿವಿಷರ್ಸ್). ಹಿಂದೆ ಯುದ್ಧ, ಕ್ರಾಂತಿ ಅಥವಾ ಒಪ್ಪಂದಗಳ ಪರಿಣಾಮವಾಗಿ ರಾಜನು ಪದಚ್ಯುತನಾದರೂ ಅರಸೊತ್ತಿಗೆಯನ್ನು ಕಳಕೊಳ್ಳದೆ ಇದ್ದಾಗ ಅವನ ಸೀಮಿತ ಅಂತಸ್ತನ್ನು ಮನ್ನಿಸಿ ಅವನಿಗೆ ವಾರ್ಷಿಕವಾಗಿ ನಿಗದಿತ ಹಣವನ್ನು ಅವನ ವೈಯಕ್ತಿಕ ಖರ್ಚಿಗೆಂದು ಕೊಡುವ ಜವಾಬ್ದಾರಿಯನ್ನು ಆಯಾ ದೇಶದ ಸರ್ಕಾರಗಳು ಹೊರತೊಡಗಿದವು. ಗಣ ರಾಜ್ಯಗಳ ಉಗಮವಾದಾಗ ಅಲ್ಲಿಯ ರಾಜರು ತಮ್ಮ ರಾಜ್ಯಗಳನ್ನು ಗಣರಾಜ್ಯಕ್ಕೆ ಒಪ್ಪಂದದ ಮೂಲಕ ವಿಲೀನಗೊಳಿಸುವಾಗ ಅವರು ಕಳೆದುಕೊಳ್ಳುವ ಅಧಿಕಾರಕ್ಕೆ ಮತ್ತು ಆಸ್ತಿಗೆ ಪ್ರತಿಫಲವಾಗಿ ಗೊತ್ತುಪಡಿಸಿದ ವಾರ್ಷಿಕ ಹಣಪಾವತಿಯನ್ನು ತೆರಿಗೆರಹಿತವಾಗಿ ಮಾಡುವ ಪರಿಪಾಠ ಸ್ವತಂತ್ರ ರಾಷ್ಟ್ರಗಳಲ್ಲಿ ಐತಿಹಾಸಿಕ ಬೆಳವಣಿಗೆಯಾಗಿ ಬಂತು. ಈ ರೀತಿ ಮಾಜಿ ರಾಜರುಗಳಿಗೆ ಅವರ ಖಾಸಗಿ ವೆಚ್ಚಕ್ಕಾಗಿ ರಾಜಧನ ನೀಡುವುದು ನಡೆದುಬಂತು.

ಪರರಾಷ್ಟ್ರಗಳಲ್ಲಿ ರಾಜಧನ : 17 ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ವ್ಯಾಪಕ ಜನಂದೋಲನದ ಪರಿಣಾಮವಾಗಿ ರಾಜನ ನಿರಂಕುಶ ಪ್ರಭುತ್ವ ಕೊನೆಗೊಂಡು ಸಾಂವಿಧಾನಿಕ ಪ್ರಭುತ್ವ ಸ್ಥಾಪಿತವಾಯಿತು. ಅನಂತರ ಸಂಸತ್ತು ರಾಜನ ವೈಯಕ್ತಿಕ ಖರ್ಚಿಗಾಗಿ ಕೆಲವೊಂದು ಕಂದಾಯಗಳನ್ನು ಆ ಉದ್ದೇಶಕ್ಕೆ ಬಿಟ್ಟು ಹೆಚ್ಚಿನ ಆದಾಯ ಮೂಲಗಳನ್ನು ರಾಜ್ಯದ ಆಡಳಿತಕ್ಕಾಗಿ ವಿನಿಯೋಗಿಸತೊಡಗಿತು. ಧಾರ್ಮಿಕ ಸಂಸ್ಥೆಗಳಿಂದ ಬರುವ ಕಂದಾಯ, ರಾಜನ ಖಾಸಗಿ ಜಮೀನುಗಳಿಂದ ಬರುವ ವರಮಾನ, ಸಮುದ್ರದಲ್ಲಿ ನಾಶವಾದ ಹಡಗಿನ ವಸ್ತುಗಳ ಮೇಲೆ ಸ್ವಾಮಿತ್ವ ಮತ್ತು ರಾಜನ ಮೀನುಗಾರಿಕೆಯ ಹಕ್ಕುಗಳಿಂದ ಬರುವ ಆದಾಯವೂ ರಾಜನಿಗೆ ಮೀಸಲಾಗಿತ್ತು. ಭೂಕಂದಾಯದಲ್ಲಿ ವಾರ್ಷಿಕವಾಗಿ 7000 ಪೌಂಡು ಹಣವನ್ನು ರಾಜನಿಗೆ ತೆಗೆದಿಡಲಾಗುತ್ತದೆ. ವಾರ್ಷಿಕ ಬಜೆಟ್ ಪೂರೈಕೆಯ ಬದಲಿಗೆ 1952 ರಲ್ಲಿ `ಸಿವಿಲ್ ಲಿಸ್ಟ್ ಕಾಯಿದೆಯನ್ನು ಸಂಸತ್ತು ಅಂಗೀಕರಿಸಿ ಸಂಚಯಿತ ನಿಧಿಯಿಂದ ವಾರ್ಷಿಕವಾಗಿ 4,75,000 ಪೌಂಡ್ ಹಣವನ್ನು ರಾಜಧನವಾಗಿ ಕೊಡಲು ಏರ್ಪಾಟು ಮಾಡಿತು. 1972ರಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿಯನ್ನು ತರಲಾಗಿ ರಾಜಧನವನ್ನು 9,80,000 ಪೌಂಡುಗಳಿಗೆ ನಿಗದಿಪಡಿಸಲಾಯಿತು. ಅರಸೊತ್ತಿಗೆಗಳು ಕ್ರಾಂತಿಯ ಮೂಲಕ ಸಂಪೂರ್ಣ ಪತನವಾದ ಫ್ರಾನ್ಸ್ ಮತ್ತು ರಷ್ಯ ದೇಶಗಳಲ್ಲಿ ಮಾಜಿ ರಾಜರುಗಳಿಗೆ ಅಥವಾ ಅವರ ಪರಿವಾರಕ್ಕೆ ಯಾವುದೇ ರಾಜಧನ ನೀಡಿಕೆಯ ನಿದರ್ಶನಗಳಿಲ್ಲ.
ಭಾರತದಲ್ಲಿ ರಾಜಧನ: ಬ್ರಿಟಿಷ್ ಸರ್ಕಾರ ಭಾರತೀಯ ರಾಜರ ಅರಸೊತ್ತಿಗೆಯನ್ನು ಯುದ್ಧ ಮತ್ತು ಒಪ್ಪಂದಗಳ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡಾಗಿ ಅಲ್ಲಿಯ ರಾಜರುಗಳ ಪರಿವಾರದ ಪೋಷಣೆಗೆ ಆ ಒಪ್ಪಂದಗಳಲ್ಲಿ ತಕ್ಕ ವ್ಯವಸ್ಥೆ ಮಾಡಲಾಗುತ್ತಿತ್ತು. 1935 ರ ಭಾರತ ಸರಕಾರ ಅಧಿನಿಯಮದಲ್ಲಿ ಒಪ್ಪಂದ ಮಾಡುವ ಅಧಿಕಾರ ಮತ್ತು ಒಪ್ಪಂದಗಳ ರಕ್ಷಣೆ ಕುರಿತು ಪ್ರಾವಿದಾನಗಳಿದ್ದವು. 1947ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಭಾರತೀಯ ಸ್ವಾತಂತ್ರ್ಯ ಅಧಿನಿಯಮವನ್ನು ಅಂಗೀಕರಿಸಿ ತನ್ಮೂಲಕ ದೇಶೀಯ ರಾಜರ ಮೇಲೆ ಆ ತನಕ ಇದ್ದ ಬ್ರಿಟಿಷ್ ಅಧಿಪತ್ಯ ಕೊನೆಗೊಂಡಿತೆಂದೂ ದೇಶೀಯ ರಾಜರು ತಮ್ಮಿಷ್ಟದಂತೆ ಭಾರತ ಅಥವಾ ಪಾಕಿಸ್ತಾನಕ್ಕೆ ತಮ್ಮ ರಾಜ್ಯಗಳನ್ನು ವಿಲೀನಗೊಳಿಸಲು ಸ್ವತಂತ್ರರೆಂದೂ ಘೋಷಿಸಿತು. ಬ್ರಿಟಿಷ್ ಪರಮಾಧಿಕಾರದಿಂದ ಮುಕ್ತರಾದ 552 ದೇಶೀಯ ರಾಜರು ತಮ್ಮ ರಾಜ್ಯಗಳನ್ನು ಭಾರತದಲ್ಲಿ ವಿಲೀನಗೊಳಿಸಿದರು. ಹೀಗೆ ಜನಾಭಿಪ್ರಾಯವನ್ನು ಮನ್ನಿಸಿ ಸ್ವತಂತ್ರ ರಾಷ್ಟ್ರದ ಏಕತೆಗೆ ಸಹಕರಿಸಿದ ರಾಜರುಗಳಿಗೆ ಒಪ್ಪಂದದ ಪ್ರಕಾರ ರಾಜಧನವನ್ನೂ ಮತ್ತಿತರ ಸೌಲಭ್ಯಗಳನ್ನೂ ತೆರಿಗೆ ರಹಿತವಾಗಿ ನೀಡುವುದಕ್ಕೆ ಭಾರತ ಸರ್ಕಾರ ಆಶ್ವಾಸನೆ ನೀಡಿತು. ಈ ಪ್ರಕ್ರಿಯೆಯ ರೂವಾರಿಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಸಂವಿಧಾನ ರಚನಾ ಸಭೆಯಲ್ಲಿ ರಾಜಧನಕ್ಕೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವುದನ್ನು ಸಮರ್ಥಿಸಿ ಮಾತನಾಡಿದರು. `ಭಾರತದ ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಏಕತೆಯ ಆದರ್ಶವನ್ನು ಸಾಧಿಸುವಲ್ಲಿ ಭಾರತೀಯ ರಾಜರ ಕೊಡುಗೆ ಅಪಾರವಾದದ್ದು. ರಾಜರುಗಳ ವೈಯಕ್ತಿಕ ಅಂತಸ್ತನ್ನು ಪಲ್ಲಟಮಾಡುವುದಿಲ್ಲ ಎಂಬ ಆಶ್ವಾಸನೆಯ ಆಧಾರದಲ್ಲಿ ವಿಲೀನದ ಪ್ರಕ್ರಿಯೆಯು ಅಹಿಂಸಾತ್ಮಕವಾಗಿ ನಡೆದುದರಿಂದ ಈ ಒಪ್ಪಂದದಲ್ಲಿ ಆಶ್ವಾಸನಬದ್ಧ ರಾಜಧನಕ್ಕೆ ಸಾಂವಿಧಾನಿಕ ರಕ್ಷಣೆಯನ್ನು ಕೊಡುವುದು ನಮ್ಮ ಕರ್ತವ್ಯ ಎಂಬ ಅಭಿಪ್ರಾಯಪಟ್ಟರು. ಸಂವಿಧಾನ ರಚನಾಸಭೆ ಈ ವಿಚಾರವನ್ನು ಸರ್ವಾನುಮತದಿಂದ ಒಪ್ಪಿ 291, 362, 363 ಮತ್ತು (22) ಈ ಪರಿಚ್ಛೇದಗಳಲ್ಲಿ ಈ ಬಗ್ಗೆ ಪ್ರಾವಿಧಾನಗಳನ್ನು ಮಾಡಿತು. 
 ಪರಿಚ್ಛೇದ 291ರ ಪ್ರಕಾರ, ಈ ಸಂವಿಧಾನದ ಪ್ರಾರಂಭದ ಮುಂದೆ ಭಾರತ ಸರ್ಕಾರ ಯಾವುದೇ ಭಾರತೀಯ ರಾಜನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ತೆರಿಗೆ ರಹಿತವಾಗಿ ರಾಜಧನವನ್ನು ಕೊಡಲು ಆಶ್ವಾಸನೆ ಕೊಟ್ಟಿರುವಲ್ಲಿ ಅಂಥ ರಾಜಧನವನ್ನು ಭಾರತ ಸಂಚಯಿತ ನಿಧಿಯಿಂದ ಕೊಡತಕ್ಕದ್ದು ಮತ್ತು ಇದು ವರಮಾನ ತೆರಿಗೆಯ ಕಾನೂನಿನ ವ್ಯಾಪ್ತಿಗೆ ಹೊರತಾದದ್ದು. ಪರಿಚ್ಛೇದ 362 ರ ಪ್ರಕಾರ ರಾಜಧನವನ್ನು ಶಾಸನಾಧಿಕಾರ ಉಲ್ಲಂಘಿಸಲಾಗದು; ಪರಿಚ್ಛೇದ 363 ನ್ಯಾಯಾಲಯದ ಅಧಿಕಾರದ ವ್ಯಾಪ್ತಿಯಿಂದ ರಾಜಧನದ ಕಕ್ಷಿಗಳನ್ನು ಹೊರಗಿಟ್ಟಿತು. ಪರಿಚ್ಛೇದ 365 (22) ಅಡಿಯಲ್ಲಿ ಆದೇಶ ಹೊರಡಿಸಿ ಭಾರತೀಯ ರಾಜರನ್ನು ಮಾನ್ಯ ಮತ್ತು ಅಮಾನ್ಯ ಮಾಡುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿದ್ದಾರೆ. ರಾಜರುಗಳಿಂದ ಪಡೆದ ಭೂಪ್ರದೇಶ ಮತ್ತು ಸೊತ್ತಿನ ಆಧಾರದ ಮೇಲೆ ರಾಜಧನವನ್ನು ನಿಗದಿಪಡಿಸಲಾಗಿತ್ತು.

ರಾಜಧನದ ರದ್ಧತಿ : 1967 ರಿಂದಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಧೋರಣಾ ನಿರ್ಣಯಗಳು ರಾಜಧನದ ರದ್ಧತಿಗೆ ಒತ್ತು ಕೊಟ್ಟಿದ್ದವು. ದೇಶದ ಸಂಕಷ್ಟಮಯ ಆರ್ಥಿಕ ಸ್ಥಿತಿ, ಬಡತನ ನಿರ್ಮೂಲನದ ನೀತಿ ಮತ್ತು ಸಮಾಜವಾದದ ತೀವ್ರಗಾಮಿ ಧೋರಣೆಗಳು ರಾಜಧನ ರದ್ದು ಮಾಡುವ ದಿಕ್ಕಿನತ್ತ ಕೆಲಸ ಮಾಡಿದವು. ಸರ್ಕಾರದ ವಕ್ತಾರರು `ರಾಜಧನ ಮತ್ತು ವಿಶೇಷ ಸವಲತ್ತುಗಳನ್ನೊಳಗೊಂಡ ರಾಜತ್ವದ ಪರಿಕಲ್ಪನೆ ಸಮಕಾಲೀನ ಕಾರ್ಯಗಳಿಗೆ, ಸಾಮಾಜಿಕ ಉದ್ದೇಶಗಳಿಗೆ ಮತ್ತು ಸಮಾನತೆಯ ಸಂಸ್ಕøತಿಯ ಸಾಮಾಜಿಕ ವ್ಯವಸ್ಥೆಗೆ ವಿರುದ್ಧವಾಗಿತ್ತು. ಅದು ಶ್ರಮಭರಿತ ಸಂಪಾದನೆಯ ತತ್ತ್ವಗಳನ್ನು ಅಲ್ಲಗಳೆಯುತ್ತದೆ ಎಂದರು. ಈ ಹಿನ್ನೆಲೆಯೊಂದಿಗೆ 1970 ರಲ್ಲಿ ರಾಜಧನ ರದ್ದು ಮಾಡುವ ಉದ್ದೇಶದಿಂದ ಮಂಡಿಸಲಾದ ಸಾಂವಿಧಾನಿಕ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ತಿರಸ್ಕøತವಾಯಿತು. ರಾಷ್ಟ್ರಪತಿಯವರು ಪರಿಚ್ಛೇದ 366(22)ರ ಅಡಿಯಲ್ಲಿ ಆದೇಶ ಹೊರಡಿಸಿ ಕೆಲವು ರಾಜರುಗಳನ್ನು ರಾಜಧನ ಪಡೆಯುವುದರಿಂದ ಅಮಾನ್ಯಗೊಳಿಸಿದರು. ಸಂತ್ರಸ್ತರಾದ ರಾಜರು ಸರ್ವೋಚ್ಛ ನ್ಯಾಯಾಲಯದಲ್ಲಿ ರಾಷ್ಟ್ರಪತಿಯ ಆದೇಶದ ಸಾಂವಿಧಾನಿಕತೆಯನ್ನು ಪ್ರಶ್ನಿಸಿದರು. ಸಂವಿಧಾನದ ತಿದ್ದುಪಡಿಯ ಮೂಲಕ ಮಾತ್ರ ಸಾಧ್ಯವಿರುವುದನ್ನು ಕಾರ್ಯಾಂಗದ ಅಧಿಕಾರವನ್ನು ಚಲಾಯಿಸಿ ರಾಜಧನವನ್ನು ಚ್ಯುತಿಗೊಳಿಸಿದ್ದು ಸಂವಿಧಾನ ಬಾಹಿರವೆಂದೂ ಆಸ್ತಿ ಮತ್ತು ಸಮಾನತೆಯ ಹಕ್ಕು ಉಲ್ಲಂಘಿಸಲ್ಪಟ್ಟಿವೆಯೆಂದೂ ಆದ್ದರಿಂದ ರಾಷ್ಟ್ರಪತಿಯ ಆದೇಶವು ಸಂವಿಧಾನ ಬಾಹಿರವೆಂದೂ 11 ನ್ಯಾಯಾಧೀಶರುಗಳನ್ನೊಳಗೊಂಡ ಸರ್ವೋಚ್ಛ ನ್ಯಾಯಾಲಯದ ವಿಶೇಷ ಸಾಂವಿಧಾನಿಕ ಪೀಠ (9:2 ಮತಗಳಿಂದ) ತೀರ್ಪು ನೀಡಿತು. (ಮಾಧವರಾವ್ ಸಿಂದ್ಯಾ ವಿರುದ್ಧ ಭಾರತದ ಒಕ್ಕೂಟ, ಎ. ಐ. ಆರ್. 1970 ಎಸ್. ಸಿ.530).

ಆದರೆ 1971 ರಲ್ಲಿ ಇನ್ನೊಮ್ಮೆ ಸಾಂವಿಧಾನಿಕ ತಿದ್ದುಪಡಿಯ ಮೂಲಕ ರಾಜಧನದ ರದ್ದಿಗೆ ಪ್ರಯತ್ನ ನಡೆಯಿತು. ಈ ಬಾರಿ ಸಂಸತ್ತಿನ ಎರಡೂ ಸದನಗಳು 26ನೆಯ ಸಂವಿಧಾನದ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದವು. ಪರಿಚ್ಛೇದ 291 ಮತ್ತು 362ನ್ನು ತೆಗೆದುಹಾಕಲಾಯಿತು. ಪರಿಚ್ಛೇದ 363ಎ ಅನ್ನು ಸೇರಿಸಿ ಆ ಮೂಲಕ ಭಾರತೀಯ ರಾಜರಿಗೆ ನೀಡಿದ ಮಾನ್ಯತೆ ಮತ್ತು ರಾಜಧನವನ್ನು ರದ್ದುಪಡಿಸಲಾಗಿದೆಯೆಂದು ಘೋಷಿಸಲಾಯಿತು. ಭಾರತದ ಇತಿಹಾಸದ ಒಂದು ಮಜಲಲ್ಲಿ ಶಾಂತಿಯುತವಾಗಿ ಸ್ಥಳೀಯ ರಾಜರ ಅಧಿಕಾರ ಹಸ್ತಾಂತರಕ್ಕೆ ನೆರವಾಗಿ ರಾಜಧನದ ಪದ್ಧತಿ ಸಾಮಾಜಿಕ ಬದಲಾವಣೆಯ ಕಾರಣದಿಂದ ಸಮಾನತೆಯ ಹಕ್ಕೊತ್ತಾಯಕ್ಕೆ ಮಣಿಯಿತು.    								         
(ಪಿ.ಇ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ